ಮರುತ್ -
	ಗಾಳಿ. ಕಶ್ಯಪ ಮುನಿಯ ಹೆಂಡತಿ ದಿತಿ. ಇಂದ್ರನನ್ನು ಕೊಲ್ಲ ತಕ್ಕ ಮಗ ತನಗೆ ಹುಟ್ಟಬೇಕೆಂದು ಆಶಿಸಿ, ಕಶ್ಯಪನನ್ನು ಬೇಡಿ ಗರ್ಭವತಿಯಾದಳು. ಇಂದ್ರ ಈ ಸಮಾಚಾರ ತಿಳಿದು ದಿತಿಯ ಬಳಿಗೆ ಬಂದು ಅನುಗಾಲವೂ ಅವಳ ಶುಶ್ರೂಷೆಗೆ ನಿಂತ. ಒಂದು ದಿನ ದಿತಿ ಅಶುಚಿಯಾಗಿ ಹಗಲಿನಲ್ಲಿ ನಿದ್ರಿಸುತ್ತಿದ್ದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಂದ್ರ ದಿತಿಯ ಗರ್ಭವನ್ನು ಹೊಕ್ಕು ಅದನ್ನು ಏಳು ಭಾಗವಾಗಿ ಕತ್ತರಿಸಿದ. ಆಗ ಆ ಗರ್ಭ ಅಳತೊಡಗಿತು. ಅಳುತ್ತಿದ್ದ ಏಳು ತುಂಡುಗಳನ್ನು ಮರಳಿ ಏಳು ಏಳು ಭಾಗ ಮಾಡಿ 'ಮಾರೋದ ಅಳಬೇಡ ಎಂದು ಹೇಳಿದ. ಅಷ್ಟರಲ್ಲಿ ದಿತಿ ಎಚ್ಚೆತ್ತು ಇಂದ್ರನ ಕೃತ್ಯ ನೋಡಿ ತನ್ನ ಅಜಾಗರೂಕತೆಗಾಗಿ ಮರುಗಿ ಮಕ್ಕಳನ್ನು ನೀನೇ ಕಾಪಾಡು ಎಂದಳು. ಇಂದ್ರ ಅವರಿಗೆ ದೇವತ್ವವನ್ನು ಕೊಟ್ಟು ಮಾರುತ ಅಥವಾ ಮರುತ್ತುಗಳೆಂದು ಹೆಸರಿಟ್ಟ. ಹೀಗೆ ವಾಯುಗಳಲ್ಲಿ (ಮರುತ್ತು) 49 ಬಗೆಯಾಯಿತು. ಪಂಚಪ್ರಾಣಗಳನ್ನು ಇವುಗಳೊಂದಿಗೆ ಸೇರಿಸಿದರೆ 54 ಬಗೆಯಾಗುತ್ತದೆ. ಈ ವೃತ್ತಾಂತ ರಾಮಾಯಣ ಭಾಗವತಗಳಲ್ಲಿ ಬಂದಿದೆ. (ನೋಡಿ- ದಿತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ